ಮಾಂತ್ರಿಕ ವಾಸ್ತವತೆ -
	12-13ನೆಯ ಶತಮಾನಗಳಲ್ಲಿ ಯೂರೋಪಿನಲ್ಲಿ ಪ್ರಾರಂಭವಾದ ನವೋದಯದ ಪರಿಣಾಮವಾಗಿ ವೈಜ್ಞಾನಿಕ ಮನೋಧರ್ಮ ಮತ್ತು ವೈಚಾರಿಕತೆ ಬೆಳೆದವು. ಇಂದ್ರಿಯ ಗ್ರಾಹ್ಯವಾದದ್ದು ಪ್ರಯೋಗದಿಂದ ಖಚಿತ ಮಾಡಿಕೊಳ್ಳಬಹುದಾದದು, ಇವಷ್ಟೇ ಸ್ವೀಕಾರಾರ್ಹ ಎನ್ನುವ ಮನೋಧರ್ಮ ಬೆಳೆಯಿತು. ಸಾಹಿತ್ಯದಲ್ಲಿಯೂ ಇದರ ಪ್ರಭಾವ ಮೂಡಿತು. ಆದರೆ ವಿಜ್ಞಾನವೇ ಮುಂದುವರೆದಂತೆ, ಐನ್‍ಸ್ಟೀನನ ತೌಲನಿಕ ಸಿದ್ಧಾಂತದ ಒಳ ಅರ್ಥಗಳು ಸೃಷ್ಟಿವಾದಂತೆ, ಕಾಲದ ಪರಿಕಲ್ಪನೆ ಬದಲಾದಂತೆ, ವಿಜ್ಞಾನದ ಹಿಂದಿನ ಪ್ರಭಾವದಿಂದ ಸ್ವೀಕೃತವಾಗಿದ್ದ ವಾಸ್ತವತೆಯ ಪರಿಕಲ್ಪನೆ ಸಂಕುಚಿತವಾದದ್ದು ಎಂಬು ಅರಿವು ಮೂಡಿತು. ಈ ಪರಿಕಲ್ಪನೆಯ ಚೌಕಟ್ಟಿನಲ್ಲಿ ಸಾಹಿತಿಯ ವಿಭಾವನೆ (ಇಮಾಜಿನೇಷನ್) ಪೂರ್ಣ ಅಭಿವ್ಯಕ್ತಿಯನ್ನು ಪಡೆಯಲಾರದು, ಸಾಹಿತಿಯ ಅನುಭವದ ಅಭಿವ್ಯಕ್ತಿಗೆ ಇದು ನಿರ್ಬಂಧವನ್ನು ವಿಧಿಸುತ್ತದೆ ಎನ್ನುವಂತಾಯಿತು. ಇದರಿಂದ ಮೂಡಿ ಬಂದ ಪರಿಕಲ್ಪನೆ ಮಾಜಿಕ್ ರಿಯಲಿಸಂ ಅಥವಾ ಮಾಂತ್ರಿಕ ವಾಸ್ತವತೆ.

	ಮಾಂತ್ರಿಕ ವಾಸ್ತವತೆಯು ನಾವು ಇಂದ್ರಿಯ ಗ್ರಾಹ್ಯ ಅಥವಾ ಪ್ರಯೋಗ ಶೋಧನೆಗೆ ಒಪ್ಪಿ ಎಂದು ಸ್ವೀಕರಿಸುವ ವಾಸ್ತವತೆಗಿಂತ ಭಿನ್ನವಾದ ವಾಸ್ತವತೆಯನ್ನೂ ನಮ್ಮ ಅನುಭವಕ್ಕೆ ತಂದುಕೊಡುತ್ತದೆ. ಇದರ ಒಂದು ಪ್ರಸಿದ್ಧ ಉದಾಹರಣೆ ಫ್ರಿನ್ಜ್ ಕಾಫ್ಟಾನ ದ ಮೆಟಮಾರ್ಫಸಿಸ್ ದೀರ್ಘ ಕಥೆ ಅಥವಾ ಕಿರುಕಾದಂಬರಿ. ಈ ಕಥೆಯಲ್ಲಿ ಬ್ಯಾಂಕ್‍ನಲ್ಲಿ ಕೆಲಸ ಮಾಡುವ ಗುಮಾಸ್ತಿಯೊಬ್ಬ ರಾತ್ರಿ ಮಲಗಿದವನ. ಬೆಳಿಗ್ಗೆ ಏಳುವಾಗ ಒಂದು ಹುಳವಾಗಿ ಮಾರ್ಪಟಿರುತ್ತಾನೆ. ಆ ದೇಹದ ಒಳಗಿರುವುದು ಅದೇ ಚೇತನವೇ, ಅದೇ ಮನಸ್ಸೇ ಆದರೆ ದೇಹದ ರೂಪ ಬದಲಾವಣೆಯಿಂದ ಅವನ ಕುಟುಂಬದೊಂದಿಗೆ, ಅವನ ಸುತ್ತ ಮುತ್ತಲಿನ ಜನರೊಂದಿಗೆ ಸಂಬಂಧಗಳು ಸಂಪೂರ್ಣವಾಗಿ ಮಾರ್ಡಡುತ್ತವೆ, ಜನರ ಸ್ವಭಾವ, ವರ್ತನೆಗಳು ಅವನಿಗೆ ಈಗ ಹೊಸ ರೀತಿಯಲ್ಲಿ ಅನುಭವಕ್ಕೆ ಬರುತ್ತವೆ. ಅದುವರೆಗಿನ ಅವನ ವಾಸ್ತವತೆಯ ಅನುಭವ (ಇದೇ ಓದುಗರ ಅನುಭವವೂ) ಒಂದು ರೀತಿಯದು, ಈಗಿನ ವಾಸ್ತವತೆಯ ಅನುಭವವೇ ಬೇರೆ ರೀತಿಯದು ಈಗಿನ ವಾಸ್ತವತೆಯ ಅನುಭವವೇ ಬೇರೆ ರೀತಿಯದು. ಈ ವಾಸ್ತವವೂ ಸುಳ್ಳಾಲ್ಲ, ಕಾಲ್ಪನಿಕವಲ್ಲ. ಮಾಂತ್ರಿಕ ವಾಸ್ತವತೆಯ ಕೃತಿಗಳಲ್ಲಿ ಎರಡು ಬಗೆಯ ವಾಸ್ತವತೆಗಳು ಸಂಧಿಸುತ್ತವೆ.

ಮಾಂತ್ರಿಕ ವಾಸ್ತವತೆಯ ಕೃತಿಗಳಲ್ಲಿನ ಮಾಂತ್ರಿಕತೆಯ ಅಂಶಕ್ಕೂ ಮೂಢ ನಂಬಿಕೆಗೂ ಏನೇನೂ ಸಂಬಂಧವಿಲ್ಲ ಎಂದು ಗಮನಿಸುವುದು ಅಗತ್ಯ. ಮೂಢನಂಬಿಕೆಯಲ್ಲಿ ವ್ಯಾವಹಾರಿಕ ಜೀವನದಲ್ಲಿ ಪರಿಣಾಮವಾಗುವ ನಿರೀಕ್ಷಣೆ ಇರುತ್ತದೆ. (ಬೆಕ್ಕು ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿಗೆ ಹೋದದ್ದರಿಂದ ವಾಸ್ತವಿಕ ಜಗತ್ತಿನಲ್ಲಿ ಶುಭವೋ, ಅಶುಭವೋ ಪ್ರಾಪ್ತವಾಗುವ ನಿರೀಕ್ಷೆ) ಮಾಂತ್ರಿಕ ವಾಸ್ತವತೆ ಇಂಥ ನಿರೀಕ್ಷೆಗೆ ಅವಕಾಶ ನೀಡುವುದಿಲ್ಲ. ಮಾಂತ್ರಿಕ ವಾಸ್ತವತೆಯ ಕೃತಿಯಲ್ಲಿ ನಮಗೆ ಅವಾಸ್ತವ ಎನ್ನಿಸುವುದೆಲ್ಲ ಬೇರೊಂದು ವಾಸ್ತವವನ್ನು ನಮ್ಮ ಅನುಭವಕ್ಕೆ ತಂದುಕೊಡುವ ಸಂಕೇತಗಳು.

	ಮಾಂತ್ರಿಕ ವಾಸ್ತವತೆಯ ಅತ್ಯಂತ ಪ್ರಸಿದ್ಧ ಕೃತಿ ಕೊಲಂಬಿಯದ ಗೇಬ್ರಿಯಲ್ ಗಾರ್ಸಿಯಾ ಮಾರ್ಕೆಜೆನ ನೂರು ವರ್ಷದ ಏಕಾಂತ ಕಾದಂಬರಿಗೆ 1982ರಲ್ಲಿ ಸಾಹಿತ್ಯದ ನೊಬೆಲ್ ಬಹುಮಾನ ಲಭಿಸಿತು. 	

	(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ